23/12/2022
ಚೊಂಬು ಅದೃಷ್ಟ ತರಲ್ಲ, ಲಕ್ಷಾಂತರ ಹಣ ಇರಲ್ಲ - ಎಸ್ಪಿ ದೇವರಾಜ್
ರೈಸ್‌ಪುಲ್ಲಿಂಗ್ ದಂಧೆ: ಇಬ್ಬರ ಮೇಲೆ ಗೂಂಡಾಕಾಯ್ದೆ
ಕೋಲಾರ:
ರೈಸ್‌ಪುಲ್ಲಿಂಗ್ ದಂಧೆಗೆ ಬೆಂಗಾವಲಾಗಿದ್ದ ಇಬ್ಬರು ರೌಡಿಶೀಟರ್‌ಗಳ ಮೇಲೆ ಗೂಂಡಾ ಆಕ್ಟ್ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಹೊಸ ವರ್ಷದ ಒಳಗೆ ಕ್ರಮ ಕೈಗೊಳ್ಳಲಾಗುವುದೆಂದು ಎಸ್ಪಿ ದೇವರಾಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹತ್ತುಹಲವಾರು ಕ್ರಿಮಿನಲ್ ಕೇಸ್‌ಗಳಲ್ಲಿರುವ ಜತೆಗೆ ರೈಸ್‌ಪುಲ್ಲಿಂಗ್ ಮೋಸಕ್ಕೆ ಬೆನ್ನೆಲುಬಾಗಿ ನಿಂತು ಕೃತ್ಯಗಳನ್ನು ನಡೆಸುತ್ತಿರುವ ರೌಡಿಶೀಟರ್ ಆರ್.ಪಿ. ಮುನಿರಾಜು ಮತ್ತು ಕಚ್ಚಾಮಂಜು ವಿರುದ್ಧ ಗೂಂಡಾಕಾಯ್ದೆ ಬಳಸಲಾಗುತ್ತಿದೆ ಎಂದರು. ಕೋಲಾರದ ಬಂಗಾರಪೇಟೆ ಸರ್ಕಲ್‌ನ ಗಂಗಾ, ಅಗ್ನಿಹಳ್ಳಿ ದೇವರಾಜ್, ಕೀಲುಕೋಟೆಪ್ರಕಾಶ್, ಹಾರೋಹಳ್ಳಿ ಮೂರ್ತಿ, ಚಿಂತಾಮಣಿ ಮಂಜುನಾಥ್, ಚಿನ್ನಾಪುರ ಪ್ರಕಾಶ್ ನಡೆಸುತ್ತಿರುವ ರೈಸ್‌ಪುಲ್ಲಿಂಗ್ ಲೂಟಿಗೆ ಮುನಿರಾಜು ಮತ್ತು ಮಂಜು ಉಸ್ತುವಾರಿ ನಡೆಸುತ್ತಿದ್ದ ಕಾರಣ ಆರೋಪಿಗಳ ಮೇಲೆ ಕಠಿಣಕ್ರಮ ಕೈಗೊಳ್ಳಲಾಗುತ್ತಿದೆ. ರೌಡಿಶೀಟರ್ ಮುನಿರಾಜು ಮೆಟಲಾಜಿಕಲ್ ಕಂಪನಿಯನ್ನು ನೋಂದಣಿ ಮಾಡಿಸಿಕೊಂಡು ಎಂಜಿನಿಯರ್ ಎಂದು ಬಿಂಬಸಿಕೊಂಡು ತನ್ನ ಸಹಚರನನ್ನು ವಿಜ್ಞಾನಿ ಎಂದು ನಂಬಿಸಿ ಮೋಸ ಮಾಡುತ್ತಿದ್ದು ಹತ್ತಾರು ಮಂದಿಗೆ ಟೋಪಿ ಹಾಕಿ ಕೋಟ್ಯಂತರ ರೂ. ಆಸ್ತಿಪಾಸ್ತಿ ಮಾಡುವ ಮೂಲಕ ಐಷಾರಾಮಿ ಜೀವನವನ್ನು ನಡೆಸುತ್ತಿದ್ದ. ಆರೋಪಿ ಆಸ್ತಿಪಾಸ್ತಿ ವಶಪಡಿಸಿಕೊಂಡು ಕೋರ್ಟ್ ಅಟ್ಯಾಚ್‌ಮೆಂಟ್ ಮಾಡಿಸಲಾಗುತ್ತದೆ ಎಂದು ಎಸ್ಪಿ ದೇವರಾಜ್ ಮಾಹಿತಿ ನೀಡಿದರು.
೮ ಬಂಧನ: ಚಿಂತಾಮಣಿ ತಾಲೂಕಿನ ಆನೂರು ಸತೀಶ್ ಕುಮಾರ್ ಮತ್ತು ತಂದೆ ವೆಂಕಟಾಚಲಪತಿ ಅವರನ್ನು ಅಪಹರಣ ಮಾಡಿ ೭೦ ಸಾವಿರ ಕಿತ್ತುಕೊಂಡು ೨೦ ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದ ರಾಮಸಂದ್ರ ಮುನಿರಾಜು, ವಡಗೂರು ಪ್ರವೀಣ್ ಕುಮಾರ್, ಚನ್ನರಾಯಪುರ ನಾಗರಾಜ, ಕಾರಂಜಿಕಟ್ಟೆ ಮಂಜುನಾಥ, ಸಂತೇಗೇಟ್ ರಾಕೇಶ್, ಚಿಂತಾಮಣಿಯ ಮುನಗನಹಳ್ಳಿ ಆರೀಫ್ ಪಾಷ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ದೇವರಾಜ್ ತಿಳಿಸಿದರಲ್ಲದೆ ರೈಸ್ ಪುಲ್ಲಿಂಗ್ ಚೊಂಬು ನಂಬಿ ದುಡ್ಡು ಕೊಟ್ಟು ಮೋಸ ಹೋಗಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬೈಟ್ : ಎಸ್ಪಿ ದೇವರಾಜ್