17/12/2022
ಈ ಬಾರಿಯ ‘ನಂ ಸಮಾಚಾರ’ ಪಾಕ್ಷಿಕದಲ್ಲಿ ಶ್ರೀಮತಿ ಸುಧಾ ಜಯಪ್ರಕಾಶ್ ತಲವಾಟ, ಇವರು ನಡೆಸಿದ ನಮ್ಮೂರ ಹಿರಿಯ ವೈದ್ಯ ಡಾ. ಪಿ.ಎಸ್.ಮಂಜಪ್ಪ ಅವರ ಜೊತೆಗಿನ ಮಾತುಕತೆಯ ವಿವರವನ್ನು ಪ್ರಕಟಿಸಲಾಗಿದೆ. ಪತ್ರಿಕೆ ಮುದ್ರಣವಾಗಿ ಬಂದಿದೆ. ಈ ಚಳಿ, ಮಳೆ ವಾತಾವರಣದಲ್ಲಿ ವೈದ್ಯರ ಆರೋಗ್ಯದಲ್ಲಿ ಸ್ವಲ್ಪ ವೆತ್ಯಾಸ ಉಂಟಾಗಿದೆ ಎಂಬ ಮಾಹಿತಿ ನಮ್ಮ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಮಾ. ವೆಂ. ಸ. ಪ್ರಸಾದ್ ಮುಖಾಂತರ ತಿಳಿಯಿತು . ಹಾಗಾಗಿ ಅವರನ್ನು ಒಂದು ಸಲ ನೋಡಿ, ಅವರ ಕುರಿತ ಲೇಖನ ಇರುವ ಸಂಚಿಕೆಯನ್ನು ಅವರ ಕೈಗಿತ್ತು ಬಂದರೆ ಆ ಹಿರಿಯ ಜೀವ ಖುಷಿಯಾದೀತು ಎಂಬ ಭಾವ ಮನದಾಳದಲ್ಲಿತ್ತು.
ನಾನು ಅವರದೇ ಕೇರಿಯಲ್ಲಿ ಬಹಳ ವರ್ಷಗಳು ಇದ್ದರೂ ಕೂಡ ನಮ್ಮಿಬ್ಬರ ನಡುವೆ ತುಂಬಾ ಮಾತುಕತೆ ಅಥವಾ ಚರ್ಚೆ ಇರಲಿಲ್ಲ. ವಯಸ್ಸಿನ ಅಂತರವೂ ಇರಬಹುದು. ಆದರೆ ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅವರನ್ನು ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸಂದರ್ಭದಲ್ಲಿ ಅವರನ್ನು ಗೌರವಿಸಬೇಕೆಂದು ಬಹಳ ಪ್ರಯತ್ನ ಪಟ್ಟೆವು ಆದರೆ ಅವರು ಸುತಾರಾಮ್ ಒಪ್ಪಲೇ ಇಲ್ಲ. ಈಗಲೂ ಅವರನ್ನು ಗೌರವಿಸುವ ಪ್ರಯತ್ನ ನಿಂತಿಲ್ಲ.ಇವೆಲ್ಲ ಕಾರಣಗಳು ಸೇರಿ ಪತ್ರಿಕೆಯನ್ನು ಅವರಿಗೆ ನೀಡಲು ಅವರ ಮನೆಗೆ ದೌಢಾಯಿಸಿದೆ.
ಅವರ ಮನೆಗೆ ಹೋದಾಗ ಅವರ ಮಗಳು ಬಂದು, ಡಾಕ್ಟ್ರು ಊಟ ಮಾಡುತ್ತಿದ್ದಾರೆ ಬನ್ನಿ ಕೂತುಕೊಳ್ಳಿ ಎಂದು ಹೇಳಿದರು. ಒಳಗೆ ಹೋಗಿ ನಂಜುಂಡಸ್ವಾಮಿಯವರು ಬಂದಿದ್ದಾರೆ ಎಂದು ಅಪ್ಪನಿಗೆ ತಿಳಿಸಿದರು. ಕೂಡಲೇ ಅವರು, ಒಳಗೆ ಬನ್ನಿ ಎಂದು ವಿಶ್ವಾಸವಿಟ್ಟು ಆಹ್ವಾನಿಸಿದರು. ಊಟ ಮಾಡುತ್ತಾ ಸಾಗಿತ್ತು ನಮ್ಮಿಬ್ಬರ ಮಾತುಕತೆ. ದೈಹಿಕವಾಗಿ ವಯೋ ಸಹಜ ಕಾರಣದಿಂದಾಗಿ ಸ್ವಲ್ಪ ಸುಸ್ತಾಗಿದ್ದಾರೆ. ಕಿವಿ ಮಂದವಾಗಿದೆ. ಆದರೆ ಕಂಚಿನ ಕಂಠ ಹಾಗೇ ಇದೆ. ಮಾತಿನಲ್ಲಿ ಸ್ಪಷ್ಟತೆ, ನೆನಪುಗಳು ಒಂದು ಚೂರು ಆಚೀಚೆ ಆಗಿಲ್ಲ.
ನಾನು ಸಾಗರಕ್ಕೆ ಬಂದ ದಿನಗಳ ವಿಚಾರದಿಂದ ಆರಂಭಿಸಿ, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ಅವರು ಒಂದು ಹಂತದಲ್ಲಿ ಹೇಳಿದರು, "ನೋಡಿ, ನಂಜುಂಡಸ್ವಾಮಿಯವರೇ, ನಿಮ್ಮ ಹೋರಾಟ, ಪ್ರಾಮಾಣಿಕತೆ ನನಗೆ ಗೊತ್ತು. ಹಾಗೂ ತ್ರಿಮತಸ್ಥ ಬ್ರಾಹ್ಮಣರನ್ನು ಸಂಘಟಿಸಲು ಮಾಡಿದ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮನ್ನು ಹತ್ತಾರು ವರ್ಷಗಳ ಹಿಂದೆಯೇ ಕೆಲವರು ಮುಗಿಸಬೇಕು ಎಂದುಕೊಂಡಿದ್ದರು. ಇಲ್ಲಿಂದ ಓಡಿಸಬೇಕೆಂದು ಇನ್ನು ಕೆಲವರು ಪ್ರಯತ್ನ ಪಟ್ಟರು. ಆದಾಗಿಯೂ ಅದರಲ್ಲೇ ಕೆಲವರು ನಿಮ್ಮಲ್ಲಿಯೇ ಸೇರಿಕೊಂಡರು. ಆದರೆ ಇದ್ಯಾವದು ಆಗದೆ ಹತಾಶರಾಗಿ ಕೈಕಟ್ಟಿ ಕುಳಿತುಕೊಂಡರು. ನೀವು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ನಿಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿರುವುದು ನನಗೆ ಗೊತ್ತಿದೆ. ನಿಮಗೆ ದೇವರ ಆಶೀರ್ವಾದ ತುಂಬಾ ಚೆನ್ನಾಗಿದೆ"
"ಸರ್ಕಾರಿ ಆಸ್ಪತ್ರೆಯ ವಿಷಯ ಬಂದಾಗೆಲ್ಲ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ ನಾನು ಇಲ್ಲಿಯವರೆಗೂ ನಿಮ್ಮ ಬಗ್ಗೆ ಸಾರ್ವಜನಿಕ ವಲಯದಲ್ಲಿ ಲಂಚಕೋರ ಎಂದಾಗಲಿ, ಭ್ರಷ್ಟ ಎಂದಾಗಲಿ ಇಲ್ಲಿಯವರೆಗೂ ಕೇಳಿಬಂದಿಲ್ಲ. ನಿಮಗೆ ಇದಕ್ಕಿಂತ ಹೆಚ್ಚಿಗೆ ಏನು ಬೇಕು ಎಂದು ಅವರು ಕೇಳಿದಾಗ, ಈ ಭೂಮಿಯಲ್ಲಿ ಹುಟ್ಟಿದ್ದಕ್ಕೂ ನನ್ನ ಜನ್ಮ ಸಾರ್ಥಕವಾಯಿತು ಎಂದುಕೊಂಡೆ.
ನಾನು ಅವರಿಗೆ ಹೇಳಿದೆ, "ನೀವಂದುಕೊಂಡಷ್ಟು ನಾನು ಪ್ರಾಮಾಣಿಕ ಅಲ್ಲ ಎಂದು ಹೇಳಿದೆ. ಕೆಲವರು ಈ ಕೆಲಸ ಆಗುವುದಿಲ್ಲ ಎಂದು ಹೇಳಿದರೂ ಕೂಡಾ, ಇಲ್ಲ; ಇದು ನಿಮ್ಮಿಂದ ಆಗುತ್ತದೆ. ದಯಮಾಡಿ ನೀವು ಒಂದು ಬಾರಿ ಹೇಳಿ, ನಮ್ಮ ಜೊತೆ ಬೆಂಗಳೂರಿಗೆ ಬನ್ನಿ ಅಥವಾ ನೀವು ಹೋಗಿ ಬನ್ನಿ ಎಂದು ಒತ್ತಾಯ ಮಾಡುತ್ತಾರೆ. ಕೆಲವೊಮ್ಮೆ ತುಂಬಾ ಅನಿವಾರ್ಯವಾಗಿ ಈ ಕೆಲಸಕ್ಕೆ ಮುಲಾಜಿಗೆ ಒಳಗಾಗಿ ಕೈ ಹಾಕಲೇ ಬೇಕಾಗುತ್ತದೆ. ಇದು ನನ್ನೊಬ್ಬನ ಸಮಸ್ಯೆಯಲ್ಲ ಸಾಮಾಜಿಕ ಜೀವನದಲ್ಲಿ ಸ್ವಲ್ಪ ಪ್ರಭಾವವಿರುವ ಎಲ್ಲಾ ಮಧ್ಯಮ ವರ್ಗದವರ ಸಮಸ್ಯೆಯೂ ಇದೇ ಆಗಿರುತ್ತದೆ. ಹೋಗುವ ಬಸ್ಸು ಅಥವಾ ಟ್ರೈನ್ ಅಲ್ಲಿ ತಂಗುವ ವಸತಿ ಗೃಹ ಓಡಾಡುವ ವಾಹನಗಳು ನಮ್ಮಗಳ ಸ್ವಂತದಾಗಿರುವುದಿಲ್ಲ . ಹಾಗಾಗಿ ಖರ್ಚಾಗುವ ಹಣವನ್ನು ಅವರಿಂದ ಪಡೆಯಲೇಬೇಕಾಗುತ್ತದೆ. ಅವರ ಕೆಲಸವಾದರೆ ನಾವು ಒಳ್ಳೆಯವರಾಗುತ್ತೇವೆ . ಇಲ್ಲದಿದ್ದರೆ ನಾವು ಅವರ ದೃಷ್ಟಿಯಲ್ಲಿ ಭ್ರಷ್ಟರಾಗುತ್ತೇವೆ. ತಮ್ಮ ಕೆಲಸವಾದ ಕೂಡಲೇ ಕೆಲವರು ತುಂಬಾ ಥ್ಯಾಂಕ್ಸ್ ಸರ್ ಎಂದು ತಲೆ ಮೇಲೆ ಕೈ ಎಳೆದು ಹೋದ ಸಂದರ್ಭವೂ ಇದೆ ಎಂದೆ. ಪ್ರಸ್ತುತ ನೀವು ಒಳ್ಳೆಯ ಉದ್ದೇಶಗನ್ನಿಟ್ಟುಕೊಂಡು ಪತ್ರಿಕೆಯನ್ನು ಪ್ರಾರಂಭಿಸಿದ್ದೀರಿ. ಪತ್ರಿಕೆಯ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಓದಿಸಿಕೊಂಡು ಹೋಗುತ್ತದೆ. ನನ್ನ ಚಂದಾ ಹಣವನ್ನು ನೀವು ತೆಗೆದುಕೊಳ್ಳಿ. ತುಂಬಾ ಸಾಲ ಮಾಡಬೇಡಿ, ನಿಮಗೂ ಈಗ ವಯಸ್ಸಾಗುತ್ತಿದೆ, ನಾವು ಮುಂದಿನವರೆಗೆ ಸಾಲದ ಹೊರೆ ಮಾಡಿ ಹೋಗಬಾರದು ಎಂದು ಸೂಕ್ಷ್ಮವಾಗಿ ಹೇಳಿದ ಮಾತು ನನಗೆ ‘ಎಚ್ಚರಿಕೆಯ ಗಂಟೆ’ ಎಂದು ಭಾವಿಸಿದೆ.
ಇಂತಹ ವಿಚಾರಗಳ ಬಂದಾಗ ನಾನು ನನ್ನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಇಂತಹ ದ್ವಂದ್ವಗಳ ನಡುವೆಯೂ ನನ್ನಿಂದ ಆದಷ್ಟು ಯಾರಿಗೂ ತೊಂದರೆ ಆಗಬಾರದು. ಬೇರೆಯವರ ಕಣ್ಣಿನಲ್ಲಿ ದುಃಖದ ನೀರು ಬರಿಸಲು ತುಂಬಾ ಬುದ್ಧಿವಂತಿಕೆ ಬೇಕಾಗಿಲ್ಲ. ಆದರೆ ಬೇರೆಯವರನ್ನು ಸಂತೋಷಪಡಿಸಲು ಹೃದಯ ವೈಶಾಲ್ಯ ಇರಬೇಕಷ್ಟೇ. ಇಂತಹ ಒಳ್ಳೆಯ ಗುಣವಂತ ಡಾಕ್ಟರ್ ಗಳೂ ಸದಾ ಆರೋಗ್ಯವಾಗಿರಲಿ ಎಂದು ನನ್ನ ಆರಾಧ್ಯ ದೈವ ಪರಮಪೂಜ್ಯ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳಲ್ಲಿ ಪ್ರಾರ್ಥಿಸುತ್ತಾ ಅವರ ಪಾದಗಳಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದು ಹೊರಬಂದೆ.
- ಮ.ಸ.ನಂಜುಂಡಸ್ವಾಮಿ,
ಪ್ರಧಾನ ಸಂಪಾದಕರು,
ನಂ ಸಮಾಚಾರ್ ಪಾಕ್ಷಿಕ ಪತ್ರಿಕೆ