07/07/2023
ಬಿಜೆಪಿಗೆ ಬುದ್ಧಿ ಹೇಳಿದ ಸಿದ್ದರಾಮಯ್ಯ ಬಜೆಟ್
ಐತಿಹಾಸಿಕ 14ನೇ ಬಜೆಟ್‌ನ್ನು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿಗರು ಹೇಳುತ್ತಿದ್ದರೆ, ಇದು ಹಿಂದೂ ಹಾಗೂ ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಬಿಜೆಪಿ ಕಡೆಯಿಂದ ಟೀಕೆ ಕೇಳಿ ಬರುತ್ತಿದೆ. ಆದರೆ ನನ್ನ ಪ್ರಕಾರ ತನಗೆ ಮತ ಹಾಕಿದವರನ್ನು ಮರೆಯದ ಒಬ್ಬ ನಾಯಕನ ಹಠದ ಬಜೆಟ್ ಎಂದು ಕಾಣಿಸುತ್ತದೆ. ಏಕೆಂದರೆ....
ಈ ಸರ್ಕಾರ ರಚನೆಗೂ ಮುನ್ನ ನಡೆದಿದ್ದ ಚುನಾವಣೆ ಪ್ರಚಾರದಲ್ಲಿ, ಗ್ಯಾರಂಟಿ ಯೋಜನೆಗಳ ಜಾರಿ, ಎನ್‌ಇಪಿ ರದ್ದು, ಪಠ್ಯಕ್ರಮ ಬದಲು, ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆ, ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ವರ್ಗಾವಣೆಗೆ ತಡೆ ಇಂತಹ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡು ಬಂದಿದ್ದರು. ಈಗ ತನ್ನ ಮತದಾರರಿಗೆ ಕೊಟ್ಟ ಮಾತಿನಂತೆ ಬಜೆಟ್‌ನಲ್ಲಿ ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಇದನ್ನು ನೋಡಿಕೊಂಡು ಬಿಜೆಪಿಯ ಒಂದಿಷ್ಟು ಬೆಂಬಲಿಗರು, ಕರ್ನಾಟಕದ ಮತದಾರರನ್ನು ಪರೋಕ್ಷವಾಗಿ ಬೈಯ್ಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುವ ಮೊದಲು, ಈ ಕೆಳಗಿನ ವಿಚಾರವನ್ನು ಒಮ್ಮೆ ಗಮನಿಸಿ.
೧. ಬೆಲೆ ಏರಿಕೆ: ರಾಜ್ಯದ ಜನರು ಗ್ಯಾರಂಟಿ ಯೋಜನೆಗಳನ್ನು ನಂಬಿ ಮತ ಹಾಕಿದ್ದು ಏಕೆ ಎನ್ನುವುದನ್ನು ಒಮ್ಮೆ ಪ್ರಾಮಾಣಿಕ ಚಿಂತನೆ ನಡೆಸಬೇಕಿದೆ. ಕೊರೊನಾ ಹಾಗೂ ಆರ್ಥಿಕ ಹಿಂಜರಿತದ ಪರೋಕ್ಷ ಪ್ರಭಾವದಿಂದ ಬೆಲೆ ಏರಿಕೆಯನ್ನು ತಡೆಯಲಾಗದಷ್ಟು ಹೊರೆಯನ್ನು ಮಧ್ಯಮ ಹಾಗೂ ಬಡ ವರ್ಗ ಅನುಭವಿಸುತ್ತಿದೆ. ಉಚಿತ ಯೋಜನೆಗಳನ್ನು ವಿರೋಧಿಸುವಾಗ, ಬೆಲೆ ಏರಿಕೆಗೆ ಪರಿಹಾರ ಕ್ರಮಗಳನ್ನು ಬಿಜೆಪಿ ಹುಡುಕಬೇಕಿತ್ತು. ಆದರೆ ನಮಗೆ ಮೋದಿ ಮಂತ್ರದಂಡವಿದೆ ಎಂದು ನಿದ್ದೆ ಮಾಡಿಕೊಂಡಿದ್ದರೆ ಪ್ರಯೋಜನವಿಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಗ್ಯಾರಂಟಿ ಯೋಜನೆಗೆ ಕೌಂಟರ್ ಪ್ಲ್ಯಾನ್ ಏನಿತ್ತು? ಈಗ ಅಂದು ವಿರೋಧಿಸಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನ ವಿಳಂಬವನ್ನು ಟೀಕಿಸಿಕೊಂಡು ಮತ್ತೆ ಇನ್ನೊಂದಿಷ್ಟು ಗೊಂದಲವನ್ನು ಬಿಜೆಪಿ ಸೃಷ್ಟಿಸುತ್ತಿದೆ.
೨. ಭರವಸೆ: ಚುನಾವಣೆಗೂ ಮುನ್ನ ಭರವಸೆ ನೀಡುವುದು ಎಲ್ಲ ರಾಜಕೀಯ ಪಕ್ಷಗಳು ಮಾಡಿಕೊಂಡು ಬಂದಿರುವ ತಂತ್ರಗಾರಿಕೆ. ಆದರೆ ಇನ್ನೊಂದು ಚುನಾವಣೆಗೆ ಹೋಗುವಾಗ ಅದರಲ್ಲಿನ ಕೋರ್ ಅಂಶಗಳನ್ನು ಅನುಷ್ಠಾನ ಮಾಡುವ ಪ್ರಯತ್ನ ಮಾಡಬೇಕು. ತಮ್ಮ ಘೋಷಣೆಯ ಪ್ರಮುಖ ಅಂಶಗಳನ್ನು ಮೊದಲ ಬಜೆಟ್‌ನಲ್ಲೇ ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಹಿಂದೆಯೂ ಸಿದ್ದರಾಮಯ್ಯ ಅವರು ಏಕವ್ಯಕ್ತಿ ಸಚಿವ ಸಂಪುಟ ಸಭೆಯಲ್ಲಿ ಇಂತಹ ನಿರ್ಧಾರ ಮಾಡಿದ್ದರು. ಇದಕ್ಕೆ ತದ್ವಿರುದ್ಧ ಎನ್ನುವಂತೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ತಾವು ಕೊಟ್ಟ ಭರವಸೆಗಳು ಮರೆತು ಹೋಗಿದ್ದವು. ಚುನಾವಣೆಗೆ ಕೆಲವು ದಿನಗಳಿದ್ದಾಗ ಇದ್ದಕ್ಕಿದ್ದಂತೆ ಎಚ್ಚರವಾಗಿ ಘೋಷಣೆ ಮಾಡುವ ಪ್ರಯತ್ನ ಮಾಡಿದರು. ಈ ವಿಚಾರ ಜನರಿಗೆ ಮುಟ್ಟುವ ಮೊದಲೇ ಮತದಾನವಾಗಿ ಹೊಸ ಸರ್ಕಾರ ರಚನೆಯಾಗಿತ್ತು.
೩. ಮತ ಬ್ಯಾಂಕ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವೂ ಅಧಿಕಾರ ದೊರೆತಾಗ ತನ್ನ ಮತಬ್ಯಾಂಕ್‌ನ್ನು ಸುಭದ್ರಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಸೈದ್ಧಾಂತಿಕವಾಗಿ ನಾನು ಕಾಂಗ್ರೆಸ್‌ನ ಸಾಕಷ್ಟು ಅಂಶಗಳನ್ನು ಒಪ್ಪದೇ ಇರಬಹುದು. ಆದರೆ ಆಯಾ ಪಕ್ಷಕ್ಕೆ ತನ್ನ ಸಿದ್ಧಾಂತ ಹಾಗೂ ಮತಬ್ಯಾಂಕ್ ರಕ್ಷಿಸಿಕೊಳ್ಳುವುದು ಅನಿವಾರ್ಯ. ಇದಕ್ಕೆ ತಕ್ಕಂತೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಬಜೆಟ್ ಮಂಡಿಸಿದೆ, ಮಂಡಿಸುತ್ತಲೇ ಹೋಗಲಿದೆ. ಆದರೆ ರಾಜ್ಯ ಬಿಜೆಪಿಯ ಕಥೆಯೇ ಬೇರೆ. ಅಧಿಕಾರಕ್ಕೆ ಬಂದ ಕೂಡಲೇ ಪಕ್ಷದ ಕೇಡರ್, ಸಿದ್ಧಾಂತವೇ ಮರೆತು ಹೋಯಿತು. ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹಾಗೂ ಸಾಕಷ್ಟು ಸೈದ್ಧಾಂತಿಕ ವಿಚಾರಗಳು ನಾಯಕರ ಕಾರು ಅಲ್ಲಾಡಿದ ಮೇಲೆ ನೆನಪಾಯಿತು. ಚುನಾವಣೆಯಲ್ಲಿ ಸೋಲುವ ಸಮೀಕ್ಷೆ ಹೊರಬಂದಾಗ ಗಮನಕ್ಕೆ ಬಂತು. ಕಾಂಗ್ರೆಸ್ ಹಾಗೂ ತನ್ನ ವಿರುದ್ಧದ ಸೈದ್ಧಾಂತಿಕ ಹೋರಾಟಕ್ಕೆ ಠಕ್ಕರ್ ಕೊಡಬೇಕಾದ ಸಂದರ್ಭದಲ್ಲಿ ಹೊಂದಾಣಿಕೆ ರಾಜಕೀಯ ಅಡ್ಡಬಂತು. ಇದಲ್ಲದೇ ಸಿದ್ಧಾಂತಕ್ಕಿಂತ ಎಲ್ಲರನ್ನೂ ಖುಷಿ ಪಡಿಸಬೇಕು, ಒಪ್ಪಿಸಿಕೊಂಡು ಸರ್ಕಾರ ನಡೆಸಿಕೊಂಡು ಹೋಗಬೇಕು ಎನ್ನುವ ಹುಚ್ಚಾಟ ಎದುರು ಬಂತು. ಆದರೆ ಸಿದ್ದರಾಮಯ್ಯ ರಾಜಕೀಯ ಶೈಲಿಯೇ ಬೇರೆ ಎನ್ನುವುದು ಅರ್ಥವಾಗದಿದ್ದರೆ ಅದು ನಿಮ್ಮ ಹಣೆಬರಹ.
೪. ನೇರ-ದಿಟ್ಟ-ನಿರಂತರ: ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಪ್ರತಿಯಲ್ಲಿನ ಆರಂಭಿಕ ಪುಟಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಒಂದು ಸರ್ಕಾರ ಅಥವಾ ರಾಜಕೀಯ ಪಕ್ಷದ ವಿರುದ್ಧ ಸರ್ಕಾರದ ಅಧಿಕೃತ ದಾಖಲೆ ಪುಸ್ತಕದಲ್ಲಿ ಇಷ್ಟೊಂದು ಚೆಂದವಾಗಿ ತೊಳೆಯಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ನೇಮ್ & ಶೇಮ್ ಮಾಡಿದ್ದಾರೆ. ಇಂತಹ ವಿಚಾರವನ್ನು ಬಜೆಟ್ ಪುಸ್ತಕದಲ್ಲಿ ಸೇರಿಸಲು ಅಂತಹ ಬಂಡ ಧೈರ್ಯ ಬೇಕು. ಇಂದಿನ ರಾಜಕೀಯದಲ್ಲಿ ಅಂತಹ ನೇರ ಹಾಗೂ ದಿಟ್ಟತನವಿದ್ದಾಗ ಮಾತ್ರ ಬದುಕಲು ಸಾಧ್ಯವಿದೆ. ಸಿದ್ದರಾಮಯ್ಯ ಅವರು ಅಲ್ಲಿ ಪ್ರಸ್ತಾಪಿಸಿರುವ ಸಾಕಷ್ಟು ವಿಚಾರ ಸತ್ಯಕ್ಕೆ ದೂರವಾಗಿರಬಹುದು ಅಥವಾ ಚರ್ಚೆಯ ವಿಷಯವಾಗಿರಬಹುದು. ಆದರೆ ತಾವು ನಂಬಿರುವ ವಿಚಾರದ ಮೂಲಕ ರಾಜಕೀಯ ವಿರೋಧಿಗಳನ್ನು ಹೇಗೆ ಹಳಿಯಬಹುದು ಎನ್ನುವುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಆದರೆ ಬಿಜೆಪಿ ನಾಯಕರು ಕಳೆದ ನಾಲ್ಕು ವರ್ಷದಲ್ಲಿ ಒಮ್ಮೆಯಾದರೂ ಇಂತಹ ಪ್ರಯತ್ನ ಮಾಡಿದ್ದರಾ? ಧಮ್ಮು, ತಾಕತ್ತು ಎಂದು ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡುವುದರಿಂದ ಏನೂ ಆಗುವುದಿಲ್ಲ. ಕೆಲಸ ಮಾಡಬೇಕಿರುವ ವಿಧಾನಸೌಧದ ಕಚೇರಿ ಹಾಗೂ ವಿಧಾನಸಭೆಯಲ್ಲಿ ಆ ಧಮ್ಮು, ತಾಕತ್ತು ತೋರಿಸಬೇಕು. ಆದರೆ ನಾಲ್ಕು ವರ್ಷಗಳ ಕಾಲ ಬಿಜೆಪಿ ನಾಯಕರು ನರಪೇತಲರಂತೆ ವರ್ತಿಸುತ್ತಿದ್ದರು.
ಮತದಾರರಿಗೆ ಬೈಯ್ಯಲು ನಾಚಿಕೆ ಆಗುವುದಿಲ್ಲವೇ?
ನಾಲ್ಕು ವರ್ಷದ ಆಡಳಿತದಲ್ಲಿ ಇಷ್ಟೆಲ್ಲ ಹುಳುಕು ಇರಿಸಿಕೊಂಡು, ಅಧಿಕಾರ ಸಿಕ್ಕಾಗ ತನ್ನ ಮತದಾರರನ್ನು ಮರೆತ ಬಿಜೆಪಿ ಇಂದು ಮತ್ತದೇ ಮತದಾರರನ್ನು ಬೈಯುತ್ತಿದೆ. ೨೦೧೪ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಿಂದ ದೂರ ಸರಿಯಲು ಕೂಡ ಇಂತಹದ್ದೇ ದುರಹಂಕಾರ ಕಾರಣವಾಗಿತ್ತು. ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗಿಂತ ದುಡ್ಡಿರುವ ನಾಯಕರು ಪಕ್ಷಕ್ಕೆ ದೊಡ್ಡದಾಗಿ ಕಂಡಿದ್ದರು. ಮತದಾರರ ಬೇಡಿಕೆ ಅವರಿಗೆ ದೊಡ್ಡದಾಗಿ ಕಾಣಿಸಿರಲೇ ಇಲ್ಲ. ಬಳಿಕ ಚುನಾವಣೆ ಸೋತಾಗಲೂ ಇವಿಎಂನ್ನು ಬೈಯ್ಯುವ ಜತೆಗೆ ಭ್ರಷ್ಟ ಮತದಾರರು ಎಂದಿದ್ದರು. ಈಗ ಕರ್ನಾಟಕದ ಬಿಜೆಪಿ ನಾಯಕರು ಕೂಡ ಇದೇ ದಿಕ್ಕಿನಲ್ಲಿ ಹೊರಟಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಸಿದ್ದರಾಮಯ್ಯ ದಾಟಿಯಲ್ಲಿ ಒಂದು ದಿನವಾದರೂ ಕಾಂಗ್ರೆಸ್ ವಿರುದ್ಧ ಈ ರೀತಿ ದಾಳಿ ನಡೆಸಿದ್ದು ಇದೆಯಾ? ಕೊನೆಯ ಅಧಿವೇಶನದ ಅಂತಿಮ ಗಳಿಗೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ʼಧಮ್ಮು, ತಾಕತ್ತುʼ ಮಾತನಾಡಿದ್ದು ಬಿಟ್ಟಿರೇ, ನಾಲ್ಕು ವರ್ಷದಲ್ಲಿ ಒಮ್ಮೆಯಾದರೂ ಸಣ್ಣ ಕ್ರಮವನ್ನು ಬಿಜೆಪಿ ಸರ್ಕಾರ ತೆಗೆದುಕೊಂಡಿತ್ತೇ? ಸರ್ಕಾರದ ಯಾವುದಾದರೂ ದಾಖಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಣ್ಣ ಉಲ್ಲೇಖ ಮಾಡಿರುವ ಉದಾಹರಣೆ ಇದೆಯೇ? ಮೈ ತುಂಬಾ ಇಷ್ಟೆಲ್ಲ ಕಜ್ಜಿ ತುಂಬಿಕೊಂಡು ಇಂದಿಗೂ ಮತದಾರರನ್ನು ಬೈಯ್ಯಲು ನಾಚಿಕೆ ಆಗುವುದಿಲ್ಲವೇ?
ಇನ್ನೊಂದೆಡೆ, ʼಸಿದ್ದರಾಮಯ್ಯ ಸರ್ಕಾರವು ಹಿಂದೂ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ, ಮತದಾರರೇ ಅನುಭವಿಸಿʼ ಎಂಬರ್ಥದ ಸಾಕಷ್ಟು ಸಂದೇಶಗಳು ಓಡಾಡುತ್ತಿವೆ. ಮತದಾರರು ಬಯಸಿದ್ದನ್ನು ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದರೆ ಈ ಫಲಿತಾಂಶ ಬರುತ್ತಲೇ ಇರಲಿಲ್ಲ ಎನ್ನುವ ಸಾಮಾನ್ಯ ವಿಚಾರವು ಬಿಜೆಪಿಗರಿಗೇ ಏಕೆ ಅರ್ಥವಾಗುತ್ತಿಲ್ಲ. ಸಮಸ್ಯೆ ಇರುವುದು ಮತದಾರರಲ್ಲಿ ಅಲ್ಲ. ಇಂದು ಸಮಸ್ಯೆಗಳು ಎನ್ನುವುದು ಇದ್ದರೆ ಅದಕ್ಕೆ ಕೆಟ್ಟು ಹೋಗಿರುವ ರಾಜ್ಯ ಬಿಜೆಪಿ ನಾಯಕತ್ವವಷ್ಟೇ ಕಾರಣ. ಸಿದ್ದರಾಮಯ್ಯ ಹಾಗೂ ಮತದಾರರನ್ನು ಬೈಯ್ಯುವ ಬದಲಿಗೆ ನೀವೇನು ಮಾಡುತ್ತಿದ್ದೀರಿ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಿ. ಸಿದ್ದರಾಮಯ್ಯ ಅವರು ತಮ್ಮ ಮತದಾರರ ಪರ ಕೆಲಸ ಮಾಡುತ್ತಿದ್ದಾರೆ. ನಿಮ್ಮನ್ನು ನಂಬಿ ಮತ ಹಾಕಿದವರ ಪರ ನೀವು ಏನು ಮಾಡಿದ್ದೀರಿ, ಮಾಡುತ್ತೀರಿ ಎನ್ನುವುದನ್ನು ಹೇಳಿ. ಇದನ್ನು ಬಿಟ್ಟು ನಾಚಿಕೆಯಿಲ್ಲದೇ ಮತದಾರರನ್ನು ಬೈಯ್ಯಬೇಡಿ. ನಿಮ್ಮ ಹೊಲಸನ್ನು ಮುಚ್ಚಿಕೊಳ್ಳುವ ಬದಲು, ಜನರೆದುರು ಹೋಗಿ ಕ್ಷಮೆ ಕೇಳಿ. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಲೋಕಸಭೆ ಫಲಿತಾಂಶ ಕೂಡ ಭಿನ್ನವಾಗಿರಲಾರದು. ಮೊದಲು ಒಬ್ಬ ಯೋಗ್ಯ, ಪ್ರಾಮಾಣಿಕ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರನ್ನು ನೇಮಿಸಿ. ಬಳಿಕ ಮತದಾರರಿಗೆ ಪ್ರವಚನ ಕೊಡಬಹುದು!
✍️ Rajeev Hegde