
19/07/2025
ವಿಜಯಪುರದಲ್ಲಿ ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ: BLDE ಸಂಸ್ಥೆಯಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ
ವಿಜಯಪುರದ ಹೆಮ್ಮೆಯ ಸಂಸ್ಥೆಯಾದ BLDE, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನ ಸಾಧನೆಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಆಯುರ್ವೇದ ಕ್ಷೇತ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲು ಮುಂದಾಗಿದ್ದು, ಜುಲೈ 27 ರಂದು ಹೈಟೆಕ್ ಆಯುರ್ವೇದ ಆಸ್ಪತ್ರೆಯನ್ನು ಉದ್ಘಾಟಿಸಲಿದೆ.
ಈ ಮಹತ್ವದ ಕಾರ್ಯಕ್ರಮವು ಬೇಲಿಮಠದ ಪರಮಪೂಜ್ಯ ಡಾ. ಶ್ರೀ ಶಿವರುದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ BLDE ಸಂಸ್ಥೆಯ ಸಾಧನೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ನೂತನ ಆಯುರ್ವೇದ ಆಸ್ಪತ್ರೆಯ ವೈಶಿಷ್ಟ್ಯಗಳು
BLDE ಸಂಸ್ಥೆ ಜನರ ಶ್ರೇಯೋಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡಿದ್ದು, ಪುರಾತನ ವೈದ್ಯ ಪದ್ಧತಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದೆ. ನೂತನ ಆಯುರ್ವೇದ ಆಸ್ಪತ್ರೆಯಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೈಟೆಕ್ ಸ್ಪರ್ಶ ನೀಡಲಾಗಿದೆ. ಆಯುರ್ವೇದ ಪದ್ಧತಿಯ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳೂ ಇಲ್ಲಿ ಲಭ್ಯವಾಗಲಿವೆ.
BLDE ಸಂಸ್ಥೆಯ ಭವಿಷ್ಯದ ಯೋಜನೆಗಳು
ಆಯುರ್ವೇದ ಆಸ್ಪತ್ರೆಯ ಉದ್ಘಾಟನೆಯ ಜೊತೆಗೆ, BLDE ಸಂಸ್ಥೆಯು ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿಯೂ ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ:
ಇನೋವೇಶನ್ ಮತ್ತು ಇನ್ಕ್ಯುಬೇಷನ್ ಕೇಂದ್ರ: ಬಿ.ಎಂ. ಪಾಟೀಲ ಫೌಂಡೇಶನ್ ವತಿಯಿಂದ ಇನೋವೇಶನ್ ಹಾಗೂ ಇನ್’ಕ್ಯೂಬಿಷನ್ ಕೇಂದ್ರವನ್ನು ಆರಂಭಿಸಲಾಗುವುದು.
ಕೌಶಲ್ಯ ಅಭಿವೃದ್ಧಿ ಕೇಂದ್ರ: ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸಲು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು.
CBSE ಶಾಲೆಗಳ ಪ್ರಾರಂಭ: ಬಸವನಬಾಗೇವಾಡಿ, ದೇವರಹಿಪ್ಪರಗಿ ಮತ್ತು ವಿಜಯಪುರ ನಗರದ ಆಲ್ ಅಮೀನ್ ಮುಂಭಾಗದ ಲಿಂಗರಾಜ ಸಂಸ್ಥೆ ಜಾಗದಲ್ಲಿ CBSE ಶಾಲೆಗಳನ್ನು ಆರಂಭಿಸಲಾಗುವುದು.
ಹೊಸ ಕಾಲೇಜುಗಳು: ಬಸವನಬಾಗೇವಾಡಿಯಲ್ಲಿ BCA ಮತ್ತು B.Pharma ಕಾಲೇಜುಗಳನ್ನು ಆರಂಭಿಸುವ ಕುರಿತು ಸಹ ಮಾಹಿತಿ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ. ವೈ. ಎಂ. ಜಯರಾಜ, ಉಪಕುಲಪತಿಗಳಾದ ಡಾ. ಅರುಣಾ ಇನಾಮದಾರ, ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ಕಾಲೇಜು ಪ್ರಾಚಾರ್ಯರಾದ ಡಾ. ಅರವಿಂದ ಪಾಟೀಲ, ಪ್ರಾಚಾರ್ಯ ಡಾ. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
#ಬಿ.ಎಲ್.ಡಿ.ಇ #ಇನ್ಕ್ಯುಬೇಷನ್ #