19/07/2026
YADGIR NEWS||ಅಯೋಧ್ಯೆ ದೇವಸ್ಥಾನ ಅವ್ಯವಹಾರಗಳ ಕುರಿತು ಪಾರದರ್ಶಕ ತನಿಖೆ ನಡೆಸಿ: ಪ್ರಧಾನಿ ಮೌನ ಮುರಿಯಲಿ – ಆದರ್ಶ್ ಯಲ್ಲಪ್ಪ ಆಗ್ರಹ
ಯಾದಗಿರಿ: ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಳಿಬರುತ್ತಿರುವ ಅವ್ಯವಹಾರಗಳ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಸಂಪೂರ್ಣ ಪಾರದರ್ಶಕ ತನಿಖೆ ನಡೆಸಬೇಕು. ದೇಶದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಸಂಬಂಧಿಸಿದ ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಆದರ್ಶ್ ಯಲ್ಲಪ್ಪ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ನಡೆಸದೆ ಜನರ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಅನೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರೂ ಅವರನ್ನು 'ಮೌನ ಪ್ರಧಾನಿ' ಎಂದು ಬಿಂಬಿಸಲಾಯಿತು. ಆದರೆ ಇಂದು ದೇಶದ ಜನರ ಪ್ರಮುಖ ಪ್ರಶ್ನೆಗಳ ಕುರಿತು ಮಾತನಾಡಬೇಕಾದ ಸಂದರ್ಭದಲ್ಲಿಯೂ ಪ್ರಧಾನಿ ಮೌನವಾಗಿರುವುದು ವಿಷಾದನೀಯ ಎಂದು ಟೀಕಿಸಿದರು.
ರಾಮಮಂದಿರ ನಿರ್ಮಾಣದ ಭೂಮಿ ಪೂಜೆ, ಮೂರ್ತಿ ಪ್ರಾಣಪ್ರತಿಷ್ಠೆ ಸೇರಿದಂತೆ ಎಲ್ಲಾ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಸ್ವತಃ ಭಾಗವಹಿಸಿದ್ದರು. ಆದರೆ ಈಗ ದೇವಸ್ಥಾನದ ಆಡಳಿತ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಗಂಭೀರ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಯಾವುದೇ ಸ್ಪಷ್ಟನೆ ನೀಡದಿರುವುದು ಸರಿಯಲ್ಲ. ದೇಶದ 85 ಶೇಕಡಕ್ಕೂ ಹೆಚ್ಚು ಹಿಂದೂಗಳ ಭಾವನೆಗಳಿಗೆ ಸಂಬಂಧಿಸಿದ ವಿಷಯ ಇದಾಗಿದ್ದು, ಜನರ ಅನುಮಾನಗಳಿಗೆ ಉತ್ತರ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಡಳಿತದಲ್ಲಿ ಪಾರದರ್ಶಕತೆ ಇರಬೇಕಿತ್ತು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೇರಿದಂತೆ ಕೆಲವು ಪ್ರಮುಖ ವ್ಯಕ್ತಿಗಳು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದ್ದರೂ, ಅದರ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ. ತನಿಖಾ ವರದಿಗಳಲ್ಲಿ ಕೆಲವು ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಇತರರ ಹೆಸರುಗಳು ಉಲ್ಲೇಖವಾಗಿವೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ನಿಜವಾದ ಹೊಣೆಗಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿಲ್ಲ ಎಂದು ಹೇಳಿದರು.
ಇದು ಕೇವಲ ಒಂದು ರಾಜ್ಯದ ವಿಷಯವಲ್ಲ. ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಕೋಟ್ಯಂತರ ಭಕ್ತರು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸಿನ ಅಕ್ರಮಗಳ ಆರೋಪಗಳು ಕೇಳಿಬಂದರೆ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ ಇಲಾಖೆ ಸ್ವಯಂಪ್ರೇರಿತವಾಗಿ ತನಿಖೆ ನಡೆಸಬೇಕಾಗಿತ್ತು. ಆದರೆ ಇದುವರೆಗೆ ಅಂತಹ ಕ್ರಮ ಗೋಚರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ತನಿಖೆ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ದೇವಸ್ಥಾನದ ಗೌರವ ಉಳಿಯಬೇಕಾದರೆ ಸತ್ಯ ಹೊರಬರಲೇಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಯಾವುದೇ ದೇವಸ್ಥಾನ ಅಥವಾ ಧರ್ಮದ ವಿರುದ್ಧವಲ್ಲ. ದೇಶದ ಕೋಟ್ಯಂತರ ಭಕ್ತರು ನಂಬಿಕೆಯಿಂದ ನೀಡಿದ ದೇಣಿಗೆ ದುರುಪಯೋಗವಾಗಬಾರದು ಎಂಬುದು ನಮ್ಮ ನಿಲುವು. ಭಕ್ತರ ಪರವಾಗಿ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿಯಾಗಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ರಾಮಮಂದಿರ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ. ತಿರುಪತಿ ತಿರುಮಲ ದೇವಸ್ಥಾನದ ಮಾದರಿಯಲ್ಲಿ ಐಎಎಸ್ ಅಧಿಕಾರಿಯನ್ನು ಸಿಇಒ ಹಾಗೂ ಆಡಳಿತಾಧಿಕಾರಿಯಾಗಿ ನೇಮಿಸಿ, ದೇವಸ್ಥಾನದ ಹಣಕಾಸು ಮತ್ತು ಆಡಳಿತ ವ್ಯವಸ್ಥೆಯನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸಬೇಕು. ಕೇವಲ ಟ್ರಸ್ಟ್ ಸದಸ್ಯರ ಮೇಲೆಯೇ ಸಂಪೂರ್ಣ ಆಡಳಿತ ಅವಲಂಬಿತವಾಗಿದ್ದರೆ ಇಂತಹ ವಿವಾದಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ದೇವಸ್ಥಾನ ನಿರ್ಮಾಣದ ಆರಂಭಿಕ ಹಂತದಲ್ಲಿಯೇ ದೇಣಿಗೆ ಸಂಗ್ರಹ, ಭೂ ಖರೀದಿ ಸೇರಿದಂತೆ ಹಲವು ವಿಷಯಗಳಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದಿದ್ದವು. ಇವುಗಳ ಕುರಿತು ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾಗುತ್ತಿವೆ. ಆದ್ದರಿಂದ ಎಲ್ಲಾ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಅದರ ಸಂಪೂರ್ಣ ವರದಿಯನ್ನು ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಪ್ರಕಟಿಸಬೇಕು. ಆಗ ಮಾತ್ರ ದೇಶದ ಕೋಟ್ಯಂತರ ರಾಮಭಕ್ತರಿಗೆ ನ್ಯಾಯ ಸಿಗಲಿದೆ ಎಂದು ಆದರ್ಶ್ ಯಲ್ಲಪ್ಪ ಆಗ್ರಹಿಸಿದರು.
ಪತ್ರಿಕೆ ಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯರು ಹಾಗೂ
ಶಾಸಕ ಚನ್ನರೇಡ್ಡಿ ತುನ್ನೂರ ಪಾಟೀಲ್,ಬಸುರೆಡ್ಡಿ ಪಾಟೀಲ್ ಅನಪುರ,ಮರೆಪ್ಪ ಕಾವಡಿ ಮತ್ತು ಇನ್ನಿತರ ಉಪಸ್ಥಿತಿದ್ದರು.